ಅಪಾರ್ಟ್‌ಮೆಂಟ್‌ಗಳ ಭದ್ರತೆ, ಡ್ರಗ್ಸ್ ವಿರುದ್ಧ ಜಾಗೃತಿ, ರಾತ್ರಿ ಬಿಗಿ ಗಸ್ತು ಬಿಗಿ.. ಬೆಂಗಳೂರು ಈಶಾನ್ಯದಲ್ಲಿ ಅಪರಾಧ ನಿಯಂತ್ರಣಕ್ಕೆ ‘ಮಿಥುನ್ ಸೂತ್ರ’

ಬೆಂಗಳೂರು: ಅಪರಾಧ ನಿಯಂತ್ರಣ, ಬಾಕಿ ಪ್ರಕರಣಗಳ ತ್ವರಿತ ತನಿಖೆ, ಸೈಬರ್ ಅಪರಾಧಗಳ ಪತ್ತೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಬೆಂಗಳೂರು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಜಿ.ಕೆ. ಮಿಥುನ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಈಶಾನ್ಯ ವಿಭಾಗದ ಎಲ್ಲ ಸಹಾಯಕ ಪೊಲೀಸ್ ಆಯುಕ್ತರು (ಎಸಿಪಿ) ಮತ್ತು ಪೊಲೀಸ್ ಇನ್‌ಸ್ಪೆಕ್ಟರ್‌ಗಳೊಂದಿಗೆ ನಡೆದ ಅಪರಾಧ ವಿಮರ್ಶನಾ ಸಭೆಯಲ್ಲಿ ಅವರು ಮಾತನಾಡಿದರು. ಅಪರಾಧ ತಡೆಗಟ್ಟುವಿಕೆ, ಪ್ರಕರಣಗಳ ತನಿಖೆ ಮತ್ತು ವಿಲೇವಾರಿ, ಸಾರ್ವಜನಿಕ ಸುರಕ್ಷತೆ ಹಾಗೂ ತಂತ್ರಜ್ಞಾನ ಆಧಾರಿತ ಪೊಲೀಸ್ ಕಾರ್ಯಾಚರಣೆಗಳ ಪ್ರಗತಿಯನ್ನು ಸಭೆಯಲ್ಲಿ ಪರಿಶೀಲಿಸಲಾಯಿತು.

ಅಪಾರ್ಟ್‌ಮೆಂಟ್‌ಗಳ ಭದ್ರತೆ ಬಿಗಿಗೊಳಿಸಲು ಸೂಚನೆ

ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಅಪಾರ್ಟ್‌ಮೆಂಟ್‌ಗಳ ವಿವರಗಳನ್ನು ನವೀಕರಿಸುವಂತೆ ಹಾಗೂ ಅಲ್ಲಿ ವಾಸಿಸುವ ವಿದೇಶಿ ಪ್ರಜೆಗಳ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡುವಂತೆ ಅಪಾರ್ಟ್‌ಮೆಂಟ್ ವೆಲ್ಫೇರ್ ಅಸೋಸಿಯೇಷನ್‌ಗಳಿಗೆ ತಿಳಿಸಲು ಸೂಚಿಸಲಾಯಿತು.

ಸೆಕ್ಯುರಿಟಿ ಗಾರ್ಡ್‌ಗಳು, ಮನೆಗೆಲಸದವರು ಹಾಗೂ ಇತರ ಸಿಬ್ಬಂದಿಯ ಪೊಲೀಸ್ ಪರಿಶೀಲನೆ ನಡೆಸುವುದು, ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಹಾಗೂ ಭೇಟಿ ನೀಡುವವರ ವಿವರಗಳನ್ನು ದಾಖಲಿಸುವ ವ್ಯವಸ್ಥೆ ಕಲ್ಪಿಸುವಂತೆಯೂ ನಿರ್ದೇಶನ ನೀಡಲಾಯಿತು.

ಮಾದಕ ವಸ್ತುಗಳ ವಿರುದ್ಧ ಅಭಿಯಾನ

ಶಾಲಾ-ಕಾಲೇಜುಗಳಲ್ಲಿ ಆ್ಯಂಟಿ ಡ್ರಗ್ ಸಮಿತಿಗಳನ್ನು ರಚಿಸಿ, ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವಂತೆ ಸೂಚಿಸಲಾಯಿತು. ಮಾದಕ ವಸ್ತುಗಳ ಅಕ್ರಮ ಮಾರಾಟ, ಸಾಗಣೆ ಮತ್ತು ಬಳಕೆಯ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ, ಎನ್‌ಡಿಪಿಎಸ್ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಯಿತು.

ಠಾಣಾವಾರು ಪ್ರಕರಣಗಳ ಪ್ರಗತಿಯನ್ನು ಪರಿಶೀಲಿಸಿ, ಬಾಕಿ ಇರುವ ಪ್ರಕರಣಗಳ ತನಿಖೆ ಪೂರ್ಣಗೊಳಿಸಿ ಶೀಘ್ರ ವಿಲೇವಾರಿ ಮಾಡುವಂತೆ ಸೂಚಿಸಲಾಯಿತು. ಆಸ್ತಿ ಸಂಬಂಧಿತ ಅಪರಾಧಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚುವುದು ಹಾಗೂ ಕಳುವಾದ ವಸ್ತುಗಳನ್ನು ವಶಪಡಿಸಿಕೊಳ್ಳುವುದಕ್ಕೆ ಆದ್ಯತೆ ನೀಡುವಂತೆ ನಿರ್ದೇಶಿಸಲಾಯಿತು.

ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳು ಹಾಗೂ ಬಾಲಕಾರ್ಮಿಕ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸುವಂತೆಯೂ ತಿಳಿಸಲಾಯಿತು. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸುವುದು, ರೌಡಿ ಶೀಟರ್‌ಗಳ ಹಿನ್ನೆಲೆ ಪರಿಶೀಲಿಸುವುದು ಹಾಗೂ ಅಗತ್ಯವಿದ್ದಲ್ಲಿ ಜಾಮೀನು ರದ್ದತಿಗೆ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಲಾಯಿತು.

ಸೈಬರ್ ಅಪರಾಧಗಳಿಗೆ ಅಂಕುಶ, ರಾತ್ರಿ ಗಸ್ತಿಗೆ ಆದ್ಯತೆ

ಬಾಕಿ ಇರುವ ಸೈಬರ್ ಅಪರಾಧ ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸುವುದರ ಜತೆಗೆ, ಅಪರಾಧ ಪತ್ತೆಗೆ Cri-MAC, NATGRID ಮತ್ತು e-Sakshya ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸುವಂತೆ ಸೂಚಿಸಲಾಯಿತು. CEIR ಪೋರ್ಟಲ್ ಮೂಲಕ ಕಳೆದುಹೋದ ಮತ್ತು ಕಳುವಾದ ಮೊಬೈಲ್‌ಗಳನ್ನು ಪತ್ತೆಹಚ್ಚಿ, ಕಾನೂನುಬದ್ಧ ಪ್ರಕ್ರಿಯೆಯ ಮೂಲಕ ಮಾಲೀಕರಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು.

COTPA ಕಾಯ್ದೆಯ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳುವುದು, ಬೀಟ್ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಸೂಕ್ಷ್ಮ ಪ್ರದೇಶಗಳು, ಪ್ರಮುಖ ರಸ್ತೆಗಳು ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸುವಂತೆಯೂ ನಿರ್ದೇಶನ ನೀಡಲಾಯಿತು.

ಸಭೆಯಲ್ಲಿ ನೀಡಿದ ಸೂಚನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಅಪರಾಧ ನಿಯಂತ್ರಣ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಡಿಸಿಪಿ ಅಧಿಕಾರಿಗಳಿಗೆ ಸೂಚಿಸಿದರು.

Previous post Karnataka government fulfils long-standing demand with 63 Tahsildar promotions
Next post Bengaluru Northeast police review focuses on cybercrime, narcotics and public safety