ನವದೆಹಲಿ: ಮುಂದಿನ ಪೀಳಿಗೆಯ ಆಡಳಿತ, ತೆರಿಗೆ ಹಾಗೂ ಸಾರ್ವಜನಿಕ ಸೇವಾ ವಿತರಣೆಯಲ್ಲಿ ಸುಧಾರಣೆ ತರಲು ಉನ್ನತ ಮಟ್ಟದ ಕಾರ್ಯಪಡೆ ರಚನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದ ಭಾಷಣದಲ್ಲಿ ಕೆಂಪುಕೋಟೆಯಿಂದ ಮಾತನಾಡಿದ ಅವರು, ‘ಮುಂದಿನ ಪೀಳಿಗೆಯ ಸುಧಾರಣೆಗಾಗಿ ನಾವು ಕಾರ್ಯಪಡೆಯನ್ನು ರಚಿಸುತ್ತಿದ್ದೇವೆ. ಈಗ ಗುರಿ ಎಲ್ಲಾ ರೀತಿಯ ಸುಧಾರಣೆಗಳನ್ನು ತರುವುದು’ ಎಂದು ಹೇಳಿದರು.
ಹಬ್ಬದ ಉತ್ಸಾಹವನ್ನು ಹೆಚ್ಚಿಸುವಂತೆ, ‘ಈ ದೀಪಾವಳಿಯಲ್ಲಿ ದೇಶವಾಸಿಗಳಿಗೆ ಡಬಲ್ ದೀಪಾವಳಿ. ಸಾಮಾನ್ಯ ಗೃಹೋಪಯೋಗಿ ವಸ್ತುಗಳ ಮೇಲಿನ ಜಿಎಸ್ಟಿಯಲ್ಲಿ ತೀವ್ರ ಕಡಿತವಾಗಲಿದೆ’ ಎಂದು ಪ್ರಧಾನಿ ಘೋಷಿಸಿದರು.
ಜಿಎಸ್ಟಿ ದರಗಳನ್ನು ಪರಿಶೀಲಿಸುವುದು ಕಾಲದ ಅಗತ್ಯವಾಗಿದೆ ಎಂದು ಒತ್ತಿಹೇಳಿದ ಅವರು, ‘ಸಾಮಾನ್ಯ ಜನರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಲಾಗುವುದು. ಜಿಎಸ್ಟಿ ದರಗಳನ್ನು ತೀವ್ರವಾಗಿ ಕಡಿಮೆ ಮಾಡಲಾಗುವುದು’ ಎಂದರು.
2017ರಲ್ಲಿ ಜಾರಿಗೆ ಬಂದ ಜಿಎಸ್ಟಿ ಈಗ ಎಂಟನೇ ವರ್ಷಕ್ಕೆ ಕಾಲಿಟ್ಟಿದ್ದು, ದೇಶದ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಏಕೀಕರಿಸುವ ಮಹತ್ವದ ಸುಧಾರಣೆ ಎಂದು ಪ್ರಧಾನಿ ನೆನಪಿಸಿದರು. ಸಂಗ್ರಹದಲ್ಲಿ ದಾಖಲೆ ಮಟ್ಟ ತಲುಪಿರುವ ಜಿಎಸ್ಟಿ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಿ, ಪಾರದರ್ಶಕತೆ ಹೆಚ್ಚಿಸಿ, ಎಲ್ಲರಿಗೂ ಸಮಾನವಾಗಿ ಅನ್ವಯಿಸುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ದೀಪಾವಳಿ ಹಬ್ಬ ಸಮೀಪಿಸುತ್ತಿರುವುದರಿಂದ, ಪ್ರಧಾನಿ ನೀಡಿರುವ “ದೊಡ್ಡ ಉಡುಗೊರೆ” ಘೋಷಣೆಯ ನಿರೀಕ್ಷೆಯಲ್ಲಿ ನಾಗರಿಕರು ಮತ್ತು ವ್ಯಾಪಾರ ವಲಯ ಕಾದು ಕುಳಿತಿದೆ.